ಕನ್ನಡ ನಾಡು | Kannada Naadu

ವಿಶ್ವಾವಸು ನಾಮ ಸಂವತ್ಸರವು ಜಗತ್ತಿಗೆ  ಧರ್ಮ, ಜ್ಞಾನ ಶಕ್ತಿ ಬೆಳಗುವ ವರ್ಷವಾಗಲಿ...

29 Mar, 2025

       ಕ್ರೋಧಿ ನಾಮ ಸಂವತ್ಸರ ಬೀಳ್ಕೊಟ್ಟು ವಿಶ್ವಾವಸು ಸಂವತ್ಸರವನ್ನು ಸ್ವಾಗತಿಸುವ ಕಾಲವಿದು. ಋತು ಬದಲಾವಣೆ ಪ್ರಕೃತಿಯಲ್ಲಿನ ನಿಯಮ. ಇದು ಬದುಕನ್ನು ಬೆಳಗಲಿ. ಎಲ್ಲರಿಗೂ ಹೊಸ ಸಂವತ್ಸರದಲ್ಲಿ ಯಶಸ್ಸು ಪ್ರಾಪ್ತಿಯಾಗಲಿ ಎಂಬ ಹಾರೈಕೆಯೊಂದಿಗೆ,  ಬೇವು ಬೆಲ್ಲದೊಂದಿಗೆ ಸ್ವಾಗತಿಸುವ ಪರ್ವದಿನ. ಇಂದಿನಾರಭ್ಯ ಶುರುವಾಗಲಿದೆ ಶ್ರೀ ವಿಶ್ವವಸುನಾಮ ಸಂವತ್ಸರ.. 
 ಬ್ರಹ್ಮದೇವನಿಂದ ಇಂದು ಸೃಷ್ಟಿಯ ನಿರ್ಮಾಣವಾಗಿತ್ತು. ಇಂದಿನ ಈ ಪರ್ವಕಾಲದಿಂಲೇ ಸತ್ಯಯುಗವು ಪ್ರಾರಂಭವಾಯಿತು. ಹೀಗಾಗಿಯೇ ಈ ದಿನದಂದು ವರ್ಷಾರಂಭವನ್ನು ಮಾಡುಲಾಗುತ್ತದೆ ಈ ದಿನ ಅರುಣೋದಯದ ಪೂರ್ವ ಕಾಲದಲ್ಲಿಯೇ ಎದ್ದು ಸ್ನಾಧಿಕಾರ್ಯಗಳನ್ನು ಮಾಡಿ ಭಗವಂತನ ನಾಮಸ್ಮರಣೆ ಮಾಡುತ್ತಾ ಮನೆ ಮುಂದೆ ರಂಗೋಲಿ ಹಾಕಿ ತಳಿರು ತೋರಣಗಳಿಂದ ಅಲಂಕರಿಸಿ, ದೇವರ ಪೂಜೆ ಮಾಡಿಬೇಕು. ದೇವರ ಮುಂದೆ  ಪಂಚಾಗಂವನ್ನು ಇಟ್ಟು  ತರಕಾರಿಗಳು -ಧಾನ್ಯಗಳು , ಫಲ-ತಾಂಬೂಲಾದಿಗಳಿಂದ ಅಲಂಕರಿಸಿ ಬೇವು ಬೆಲ್ಲವನ್ನು ನೈವೇಧ್ಯ ಮಾಡಿ ಮನೆಯಲ್ಲಿ ಹಬ್ಬದ ಊಟ ಮಾಡಬೇಕು.
ಹೊಸ ಸಂವತ್ಸರ, ಹೊಸ ಹುರುಪು, ಹೊಸ ಚಿಗುರು, ಹೊಸ ಕನಸಿಗೆ ನಾಂದಿ ಹಾಡುವ ಯುಗಾದಿ ನಮ್ಮೊಳಗೆ ಉತ್ಸಾಹವನ್ನಷ್ಟೇ ಅಲ್ಲಾ, ಬದುಕಿನ ಪಾಠವನ್ನೂ ಕಲಿಸುತ್ತದೆ. ಅದಕ್ಕೆ ಈ ಬಾರಿಯ ವಿಶ್ವಾವಸುವಿನ ಮಹತ್ವವನ್ನು ಅರಿತುಕೊಳ್ಳುವ ಅವಶ್ಯಕತೆಯೂ ಎಲ್ಲರಿಗಿದೆ. 


ಯಾರೀತ ವಿಶ್ವಾವಸು...?
  
 ಗಂಧರ್ವ ರಾಜನಾದ ʻವಿಶ್ವಾವಸುವಿಗೆʼ ಹಿಂದೂ ಪುರಾಣದಲ್ಲಿ ವಿಶಿಷ್ಠ ಸ್ಥಾನವಿದೆ.  ಆತನು ಮುಂದೆ ಚಾಂದ್ರಮಾನ ಪಂಚಾಂಗದಲ್ಲಿ ಸಂವತ್ಸರವಾಗಿ ಸಿದ್ಧನಾಗಿದ್ದಾನೆ.  ವಿಶ್ವಾವಸು ಎಂಬುದು ಸಂಸ್ಕೃತ ಪದವಾಗಿದ್ದು, "ವಿಶ್ವ" ಎಂದರೆ ಜಗತ್ತು ಅಥವಾ ಸರ್ವತ್ರ ಎನ್ನುವುದು. ಹಾಗೆಯೇ  "ವಸು" ಎಂದರೆ ಸಂಪತ್ತು ಅಥವಾ ಒಳಿತು ಎಂಬುದು.  ಆದರೆ  ಪುರಾಣಗಳಲ್ಲಿ ವಿಶ್ವಾವಸು ಎನ್ನುವ ಹೆಸರಿಗೆ ಬೇರೆಯದೇ ಅರ್ಥಪ್ರಾಪ್ತವಾಗಿದೆ. ಪುರಾಣದ ಪ್ರಕಾರ ವಿಶ್ವಾವಸು ಎಂದಾಗ  ಆತನೊಬ್ಬ ಸಾಮಾನ್ಯ ಗಂಧರ್ವನಾಗಿರದೆ ಅವನು ಗಂಧರ್ವರ ರಾಜನಾಗಿದ್ದ ಎನ್ನಲಾಗುತ್ತದೆ. ಆತ ದೇವತೆಗಳಿಗೆ ಸಂಗೀತ ಸೇವೆಯನ್ನು ನೀಡುವ ದೇವಗಾಯಕನಾಗಿದ್ದ. ಜೊತೆಗೆ ಸಂಗೀತ ವಾದನ, ನೃತ್ಯ ಮತ್ತು ಇತರ ಕಲಾವಂತಿಗೆಯಲ್ಲಿ  ಪಾರಂಗತನಾಗಿದ್ದ.
   ಇನ್ನೂ ವಿಶೇಷ ಎಂದರೆ ವಿಶ್ವಾವಸು ಗಂಧರ್ವ ರಾಜನಾಗಿ ಮಹಾಭಾರತ ಮತ್ತು ರಾಮಾಯಣದಲ್ಲಿಯೂ ಕಾಣಿಸಿಕೊಳ್ಳುತ್ತಾನೆ. ರಾಮಾಯಣದಲ್ಲಿ ವಿಶ್ವಾವಸುವು ದೇವಲೋಕದಲ್ಲಿ ಸಂಗೀತ ಸೇವೆ ನೀಡುವವ ಗಂಧರ್ವ ಎಂದು ಬಣ್ಣಿಸಿದ್ದರೆ,  ಮಹಾಭಾರತದಲ್ಲಿ ಅವನ ಕೀರ್ತಿಯು ಮಹಾನಾದ, ಕಲಾ ಪ್ರದರ್ಶಕ ಎಂದೇ ಪ್ರಖ್ಯಾತನಾಗಿದ್ದ.  ಅವನು ಪಿತೃವಂಶದ ಪ್ರಜಾಪತಿ ಕಶ್ಯಪ ಮತ್ತು ಪ್ರಧಾ ಅವರ ಮಗನಾಗಿದ್ದ. ಪ್ರಧಾ, ದಕ್ಷ ಪ್ರಜಾಪತಿಯ ಮಗಳಾಗಿದ್ದಳು. ಅವಳು ಅನೇಕ ಗಂಧರ್ವರನ್ನು ಜನ್ಮ ನೀಡಿದಳು. ಇನ್ನೂ ಮುಂದುವರೆದರೆ ದೇವಲೋಕದ ಅಪ್ಸರೆಗೆ ಜನಿಸಿದ ಪ್ರಂಧ್ವರಾ ಎನ್ನುವ ಕನ್ಯಗೆ ಈ ವಿಶ್ವವಸುವೇ ತಂದೆಯಾಗಿದ್ದ.    
 ನಮ್ಮ ದೇಶದ ಕಲೆಗಳಲ್ಲಿ ಅಗ್ರಪಂಗ್ತಿಯಲ್ಲಿರುವ ಭರತನಾಟ್ಯ ಶಾಸ್ತ್ರದ ಜನಕ ಎಂದು ಕರೆಸಿಕೊಳ್ಳುವ ಭಾರತಮುನಿಯ ನಾಟ್ಯಶಾಸ್ತ್ರದಲ್ಲಿ ಗಂಧರ್ವರು ಸಂಗೀತ ಮತ್ತು ನೃತ್ಯಕಲೆಯ  ಪರಿಣತ ಮತಿಗಳು ಎಂದು ಬಣ್ಣಿಸಲಾಗಿದೆ. ಇಂಥಹ ಶೇಷ್ಟಕಲಾವಂತರ ಪೈಕಿ, ವಿಶ್ವಾವಸುವು ಅಗ್ರಸ್ಥಾನದಲ್ಲಿ ಇದ್ದ. ಆತನಿಗೆ  ಇತರ ಗಂಧರ್ವರಿಗೆ ಇರುವ  ಸಂಗೀತಕ್ಕಿಂತ ಹೆಚ್ಚಿನ ಜ್ಞಾನವಿತ್ತು ಎನ್ನುವುದು ಸಹ ಪುರಾಣದಲ್ಲಿ ಉಲ್ಲೇಖವಾಗಿದೆ.


ಶ್ರೀ ವಿಶ್ವಾವಸು ನಾಮ ಸಂವತ್ಸರದ ಮಹತ್ವ


 ಹಿಂದೂ ಚಾಂದ್ರಮಾನ ಪಂಚಾಂಗದಲ್ಲಿ ೬೦ ಸಂವತ್ಸರಗಳ ಪೈಕಿ ಶ್ರೀ ವಿಶ್ವಾವಸು ೩೯ನೆಯ ಸಂವತ್ಸರವಾಗಿದೆ. ಪ್ರತಿ ವರ್ಷದಂತೆ ಈ ಬಾರಿಯ ಯುಗಾದಿಯಲ್ಲಿಯೂ  ಹೊಸ ಸಂವತ್ಸರ ಪ್ರಾರಂಭದಲ್ಲಿ  ಪಂಚಾಂಗ ಶ್ರವಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಈ ಬಾರಿಯ ವಿಶ್ವಾವಸು ಸಂವತ್ಸರವು ಧಾರ್ಮಿಕ ಮತ್ತು ಪೌರಾಣಿಕ ದೃಷ್ಟಿಯಿಂದ ಶ್ರೇಷ್ಠ ಸಂವತ್ಸರಗಳಲ್ಲಿ ಒಂದಾಗಿ ಪರಿಗಣಿತವಾಗಿದೆ. ಅದಕ್ಕೆ ಕಾರಣ ರಾಜಾಧಿಪತಿ  ಚಂದ್ರನಾಗಿದ್ದು, ಮಂತ್ರಿಯು ಗುರುವಾಗಿದ್ದಾನೆ. ಕುಜನು ಸೇನಾಧಿಪತಿಯಾಗಿದ್ದು, ಸಸ್ಯಾಧಿಪತಿ ಶನಿಯಾಗಿದ್ದಾನೆ.  ಧಾನ್ಯಾಧಿಪತಿ ಬುಧನಾಗಿದ್ದು, ಆರ್ಘ್ಯಾಧಿಪತಿಯು ಶುಕ್ರನಾಗಿದ್ದಾನೆ.   ಚಂದ್ರನು ಮೇಘಾಧಿಪತಿ ಹಾಗೂ ನೀರಸಾಧಿಪತಿಯಾಗಿದ್ದು, ರಸಾಧಿಪತಿ  ಸೂರ್ಯನಾಗಿದ್ದರೆ ಪಶುಪಾಲಕನಾಗಿ ಈ ಸಂವತ್ಸರದಲ್ಲಿ ಗುರುವಿರುವನು.  
ಈ ಸಂವತ್ಸರದಲ್ಲಿ ಚಂದ್ರನ ರಾಜ್ಯಾಧಿಕಾರವಿದ್ದು, ಸಸ್ಯ, ವೃಕ್ಷ, ಮತ್ತು ಕೃಷಿಯ ಬೆಳವಣಿಗೆಯು ಉತ್ತಮವಾಗಿರಲಿದೆ ಎನ್ನುವುದು ಹೇಳಲಾಗುತ್ತಿದೆ. ನಮ್ಮ ದೇಶದಲ್ಲಿ  ಗ್ರಹಗತಿಗಳ ಪ್ರಭಾವದಿಂದ ಧಾರ್ಮಿಕತೆ, ಹಿತಚಿಂತನೆ, ಮತ್ತು ಕಲಾ ಕ್ಷೇತ್ರಗಳಲ್ಲಿ ಪ್ರಗತಿ ಸಂಭವಿಸುವ ಸಾಧ್ಯತೆ ಇದೆ. ಬಹುತೇಕ ಈ ಎಲ್ಲಾ ಪ್ರಭಾವದಿಂದಾಗಿ ಈ ವರ್ಷದಲ್ಲಿ ಕೃಷಿ, ಆರೋಗ್ಯ ಮತ್ತು ವಾಣಿಜ್ಯದಲ್ಲಿ ವಿಶೇಷ ಬೆಳವಣಿಗೆಗಳಾಗಬಹುದು. ಚಂದ್ರನ ಪ್ರಭಾವದಿಂದ ಮಾನಸಿಕ ಶಾಂತಿ, ಸೌಂದರ್ಯ ಪ್ರಜ್ಞೆ, ಮತ್ತು ಧ್ಯಾನದಲ್ಲಿ ಉನ್ನತಿ ಸಂಭವಿಸಬಹುದು ಎನ್ನುವುದನ್ನು ಗ್ರಹಗತಿಗಳ ಚಲನವಲನಗಳನ್ನು ಅರಿತ ಜ್ಞಾನಿಗಳು ಅಭಿಪ್ರಾಯ ಪಡುತ್ತಿದ್ದಾರೆ.


ಪಂಚಾಗ ಶ್ರವಣದ ಮಹತ್ವ


   ಇಂದು ಪಂಚಾಂಗ ಶ್ರವಣ ಮಾಡಬೇಕು.  ಹೊಸ ವರ್ಷದಲ್ಲಿ ಬರುವ ತಿಥಿ, ನಕ್ಷತ್ರ, ಶಕವರ್ಷ, ವರ್ಷಾಧಿಪತಿ, ರಸಧಾನ್ಯಾಧಿಪತಿ, ಮೇಘಾಧಿಪತಿ, ಗ್ರಹಗತಿ, ಗೋಚಾರಫಲ, ಅಧಿಕ ಫಲ. ಪ್ರತಿಯೊಂದರೊಂದಿಗೆ, ಮಾಸದ ಫಲ, ರಾಶಿಫಲ, ಮಳೆ–ಬೆಳೆ ಮೊದಲಾದ ವಿಚಾರಗಳನ್ನು ತಿಳಿದುಕೊಳ್ಳಬೇಕು. ಯುಗಾದಿಯಂದು ಪಂಚಾಗ ಶ್ರವಣ ಮಾಡಿದ್ದಲ್ಲಿ ಸಮಸ್ತ ಮಂಗಳಕರವಾಗಿ ಇಡೀ ವರ್ಷ ನಡೆಸಬೇಕಾದ ವ್ಯವಹಾರ, ವಹಿವಾಟುಗಳು ಸರಳವಾಗಿ ನಡೆಯುವುದು.  ಜೊತೆಗೆ ಯಾವ ದಿನ ಯಾವ ಆಚರಣೆ ಮಾಡಬೇಕು, ಯಾವ ಕರ್ತವ್ಯ ನಿರ್ವಹಿಸಬೇಕು ಎಂಬುದರ ಬಗ್ಗೆ ವರ್ಷಾರಂಭದಲ್ಲಿಯೇ  ತಿಳಿದುಕೊಳ್ಳುವುದಕ್ಕೆ ಅನುಕೂಲವಾಗುತ್ತದೆ. ಅದಕ್ಕೆ ನಮ್ಮ ಪೂರ್ವಿಕರು ವರ್ಷಾರಂಭಕ್ಕೆ ಪಂಚಾಂಗ ಪಠಣ ಮಾಡುವುದರಿಂದ ಅಶುಭ ನಿವಾರಣೆಯಾಗಿ ಶುಭದ ನೆಲೆಯಾಗುತ್ತದೆ ಎನ್ನುವದನ್ನು ತಿಳಿಸಿರುತ್ತಾರೆ. 
 ಹಳ್ಳಿಗಳಲ್ಲಿ ಬಹಳ ಹಿಂದಿನಿಂದಲೂ ಪಂಚಾಂಗ ಶ್ರವಣವನ್ನೂ ಮಾಡುತ್ತಾ ಬಂದಿದ್ದಾರೆ ನಮ್ಮ ಹಿರಿಕರು. ಈಗಲೂ ಇದು ಚಾಲ್ತಿಯಲ್ಲಿದೆ. ಪಟ್ಟಣ, ನಗರಗಳಲ್ಲಿ ದೇವಸ್ಥಾನಗಳಲ್ಲಿ ಸಂಜೆ ಹೊತ್ತು ಪಂಚಾಂಗ ಶ್ರವಣ ಮಾಡುತ್ತಾರೆ. ಇದನ್ನು ಆಲಿಸಿದರೆ ಕಿವಿಗಳು ಪಾವನವಾಗುತ್ತವೆ, ಜೀವನದಲ್ಲಿ ಪುಣ್ಯಫಲ ಲಭಿಸುತ್ತದೆ, ಸುಖ, ಐಶ್ವರ್ಯ, ಯಶಸ್ಸು ಹೆಚ್ಚುತ್ತದೆ, ನವಗ್ರಹದ ಆಶೀರ್ವಾದ ಸಿಗುತ್ತದೆ, ದೇವರ ದರ್ಶನದಂತೆ ಪಂಚಾಂಗ ಶ್ರವಣವೂ ದೈವೀ ಮನೋಭಾವನೆ ಮೂಡಿಸುತ್ತದೆ ಎನ್ನಲಾಗುತ್ತದೆ.
          ವರ್ತಮಾನ ಸಮಯ ಕಲಿಯುಗದ ಕೊನೆಯ ಹಾಗೂ ಸತ್ಯಯುಗದ ಸಂಗಮ ಸಮಯ, ಸಂಗಮಯುಗವಾಗಿದೆ. ಹೀಗೆ ಕಲಿಯುಗದ ಅಂಧಕಾರದ ರಾತ್ರಿಯನ್ನು ಸತ್ಯಯುಗದ ಈ ದಿನದ ಬೆಳಕನ್ನಾಗಿ ಪರಿವರ್ತಿಸುವ ಉದಯ ಕಾಲವೇ ‘ಯುಗಾದಿ’. ಈ ಯುಗಾದಿಯ ಸಮಯದಲ್ಲಿ ನಿರಾಕಾರ ಶಿವನು ಪ್ರಜಾಪಿತ ಬ್ರಹ್ಮಾರವರ ಶರೀರದಲ್ಲಿ ಪ್ರವೇಶ ಮಾಡಿ, ಹೊಸ ಸೃಷ್ಟಿಯ ಸ್ಥಾಪನೆ ಮಾಡುವನು. ಕಲಿಯುಗದ ತಮೋಪ್ರಧಾನ ಮನುಷ್ಯಾತ್ಮರಿಗೆ ಸತ್ಯ ವನ್ನು ನೀಡಿ, ಅವರಿಗೆ ಸಹಜ ರಾಜಯೋಗವನ್ನು ಕಲಿಸಿ, ಅವರನ್ನು ಸ್ವರ್ಗ ಅಥವಾ ರಾಮರಾಜ್ಯಕ್ಕಾಗಿ ಬೇಕಾಗುವ ಶ್ರೀ ಲಕ್ಷ್ಮೀ-ನಾರಾಯಣ, ಶ್ರೀರಾಮ-ಸೀತೆಯರ ಸಮಾನ ದೇವಾತ್ಮರನ್ನಾಗಿ ಮಾಡುತ್ತಾನೆ. ಅದಕ್ಕಾಗಿಯೇ ರಾಮಾಯಣದಲ್ಲಿ ಇಂದ್ರನು ವ್ಶೆಜಯಂತಿ ಮಾಲೆಯನ್ನು ಹಾಗೂ ಚಿನ್ನದ ಕಲಶವನ್ನು ವಸುವಿಗೆ ನೀಡಿದ ದಿನವೆಂದು ಹೇಳಲಾಗುತ್ತದೆ. ಇಂಥಹ ಪುಣ್ಯ ದಿನದಿಂದ ನಾವೆಲ್ಲಾ ಕೆಲವು ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕು.  ಆ ಪೈಕಿ ಪ್ರಮುಖವಾದದ್ದು ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಜವಬ್ದಾರಿಯಾಗಬೇಕು. ನೆಲ ಜಲ ಮತ್ತು ಭಾಷೆಯ ಮೇಲಿನ ಪ್ರೀತಿ ತಾಯಿಯ ಮೇಲಿನ ಮಮತೆಯಂತೆ ಇರಬೇಕು. ಜ್ಞಾನ ಮತ್ತು ಭಕ್ತಿಯ ಮೂಲಕ ಸಮನ್ವಯ ಸಾಧಿಸಿ ನಾಡು ಕಟ್ಟುವ ಸಂಕಲ್ಪ ಪ್ರತಿಯೋಬ್ಬನೂ ಮಾಡೋಣ ಎನ್ನು ಸಂಕಲ್ಪವನ್ನು ಈ ದಿನ ಮಾಡಬೇಕಿದೆ.
         ಈ ರೀತಿಯಾಗಿ ಯುಗಾದಿಯು ನಾಡಿಗೆ ಮಾತ್ರವಲ್ಲದೆ, ಇಡೀ ವಿಶ್ವಕ್ಕೇ ಉಜ್ವಲತೆಯನ್ನು, ಜನತೆಗೆ ಸುಖ ಶಾಂತಿಯನ್ನು ನೀಡುವ ವಜ್ರಸಮಾನ ಸಮಯವಾಗಿದೆ. ನಿರಾಕಾರ ಭಗವಂತನು ಈ ಅಂತಿಮ ಸಮಯದಲ್ಲಿ ಎಲ್ಲರಿಗೂ ಆರೋಗ್ಯ, ಧೈರ್ಯ, ನೆಮ್ಮದಿ, ಪ್ರೀತಿ, ಕರೋನ ವೈರಸದಿಂದ ಮುಕ್ತಿ ನೀಡಲಿ ಎಂದು ಶುಭಹಾರೈಕೆಗಳನ್ನು ನೀಡಲಾಗುತ್ತಿದೆ.

 


ಶ್ರೀ ಶ್ರೀ ಶ್ರೀ ಡಾ.ನಿಶ್ಚಲಾನಂದನಾಥ ಸ್ವಾಮಿಜಿ
ಪಿಠಾಧ್ಯಕ್ಷರು
ವಿಶ್ವ ಒಕ್ಕಲಿಗರ ಮಠ
ಕೆಂಗೇರಿ, ಬೆಂಗಳೂರು

 

 

 

Publisher: ಕನ್ನಡ ನಾಡು | Kannada Naadu

Login to Give your comment
Powered by